ಬೈಕ್ ಢಿಕ್ಕಿ: ಸತತ ಕಾರ್ಯಾಚರಣೆ ಬಳಿಕ ರಾಜಾಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ದ್ವಿಚಕ್ರ ವಾಹನ ಸವಾರನ ಮೃತ ದೇಹ ಕೊನೆಗೂ ಪತ್ತೆಯಾಗಿದೆ. ಬೆಂಗಳೂರು: ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಾಜಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ದ್ವಿಚಕ್ರ ವಾಹನ ಸವಾರನ ಮೃತ ದೇಹ ಕೊನೆಗೂ ಪತ್ತೆಯಾಗಿದೆ.ಬ್ಯಾಟರಾಯನಪುರ ನಿವಾಸಿ ಹೇಮಂತ್ ಕುಮಾರ್ (28) ಮೃತದೇಹ ವೃಷಭಾವತಿ ಕಾಲುವೆಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಬ್ಯಾಟರಾಯನಪುರದ ಹೇಮಂತ್ ಎಂದು ಗುರುತಿಸಲಾಗಿದ್ದು, ಈ ಯುವಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.ಎಂದಿನಂತೆ ಕೆಲಸ ಮುಗಿಸಿ, ಶುಕ್ರವಾರ ರಾತ್ರಿ 10:30ರ ವೇಳೆಗೆ ಮನೆಗೆ ತೆರಳುತ್ತಿದ್ದಾಗ ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿ ರಾಜಕಾಲುವೆಗೆ ಬಿದ್ದಿದ್ದ. ಬಳಿಕ ಆತನ ಬೈಕ್ ಪತ್ತೆಯಾಗಿತ್ತಾದರೂ ದೇಹ ನಾಪತ್ತೆಯಾಗಿತ್ತು.ಹೀಗಾಗಿ ಕಳೆದ 2 ದಿನಗಳಿಂದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸವಾರನ ಪತ್ತೆಗೆ ರಾಜಕಾಲುವೆಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದು, ಆತನ ಸುಳಿವು ಇನ್ನೂ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆಯೂ ಶೋಧ ಕಾರ್ಯ ನಡೆದಿತ್ತು. ಕೊನೆಗೂ ಇದೀಗ ಮೃತ ಹೇಮಂತ್ ಮೃತದೇಹ ಪತ್ತೆಯಾಗಿದೆ.